ಪಿಲ್ಸೂಟ್ಸ್ಕಿ, ಯೂಜೆ಼ಫ್
1867-1935 ಪೋಲೆಂಡಿನ ಸೇನಾನಿ, ರಾಜಕಾರಣಿ. 1867 ರ ಡಿಸೆಂಬರ್ 5 ರಂದು ವಿಲ್ನೋ ಪ್ರಾಂತ್ಯದಲ್ಲಿ (ಈಗ ಇದು ಸೋವಿಯತ್ ದೇಶದ ಭಾಗವಾಗಿದೆ) ಹುಟ್ಟಿದ. ಯುವಕರ ಸಂಘಟನೆಯನ್ನು ಸೇರಿ, eóÁರ್ ದೊರೆ 3 ನೆಯ ಅಲೆಗ್ಸಾಂಡರ್‍ನನ್ನು ಕೊಲೆ ಮಾಡುವ ಪಿತೂರಿಯಲ್ಲಿ ಸೇರಿದ್ದನೆಂಬ ಆಪಾದನೆಗೆ ಒಳಗಾಗಿ ಐದು ವರ್ಷಗಳ ಕಾಲ ಸೈಬೀರಿಯದಲ್ಲಿ ದುಡಿಮೆಯ ಶಿಕ್ಷೆಗೆ ಗುರಿಯಾದ (1887). 1892 ರಲ್ಲಿ ಸೈಬೀರಿಯದಿಂದ ಹಿಂತಿರುಗಿದ ಮೇಲೆ ಪೋಲಿಷ್ ಸಮಾಜವಾದಿ ಪಕ್ಷದ ನಾಯಕನಾದ. 1894 ರಲ್ಲಿ ಈತ ಕಾರ್ಮಿಕ ಎಂಬ ಕ್ರಾಂತಿಕಾರಿ ಗುಪ್ತ ಪತ್ರಿಕೆಯನ್ನು ಹೊರಡಿಸಿದ. ಆದರೆ 1900 ರಲ್ಲಿ ಈ ಪತ್ರಿಕೆಯ ಮುದ್ರಣಾಲಯ ಪತ್ತೆಯಾಯಿತು. ಪಿಲ್ಸೂಟ್ಸ್ಕಿ ಬಂಧನಕ್ಕೆ ಒಳಗಾದ. ಆದರೆ ಇವನು ಸೆರೆಮನೆಯಿಂದ ತಪ್ಪಿಸಿಕೊಂಡು ಇಂಗ್ಲೆಂಡಿಗೆ ಹೋದ. 1902 ರಲ್ಲಿ ಪೋಲೆಂಡಿಗೆ ಹಿಂದಿರುಗಿ ಚಳವಳಿಯನ್ನು ಮುಂದುವರಿಸಿದ. ಗುಪ್ತ ಸೈನ್ಯವೊಂದನ್ನು ಇವನು ಸಂಘಟಿಸಿದ. 1914 ರಲ್ಲಿ ಒಂದನೆಯ ಮಹಾಯುದ್ಧ ಆರಂಭವಾದಾಗ ತನ್ನ ನಾಯಕತ್ವದಲ್ಲಿದ್ದ 10,000 ಮಂದಿಯ ಸೇನೆಯೊಂದಿಗೆ ಆಸ್ಟ್ರಿಯಾಕ್ಕೆ ನೆರವಾಗಿ ರಷ್ಯದ ವಿರುದ್ಧ ಹೋರಾಡಿದ. ಆದರೆ ಇವನು 1916 ರಲ್ಲಿ ಸೇನಾಧಿಪತ್ಯಕ್ಕೆ ರಾಜೀನಾಮೆ ನೀಡಬೇಕಾಯಿತು. ಜರ್ಮನಿಯೂ ಆಸ್ಟ್ರಿಯಾವು ಪೋಲೆಂಡಿನ ವ್ಯವಹಾರಗಳಲ್ಲಿ ಕೈಹಾಕುತ್ತಿದ್ದುದ್ದೇ ಇದಕ್ಕೆ ಕಾರಣ. ಪೋಲೆಂಡಿನ ಸ್ವಾತಂತ್ರಕ್ಕಾಗಿ ಇವನ ಹೋರಾಟ ಮುಂದುವರಿಯಿತು. 1916 ರ ನವೆಂಬರ್‍ನಲ್ಲಿ ಕೇಂದ್ರ ಶಕ್ತಿಗಳು (ಒಂದನೆಯ ಮಹಾಯುದ್ಧದಲ್ಲಿ ಒಂದಾಗಿದ್ದ ಜರ್ಮನಿ, ಆಸ್ಟ್ರಿಯಾ - ಹಂಗೇರಿ, ಬಲ್ಗೇರಿಯ ಮತ್ತು ತುರ್ಕಿ ದೇಶಗಳು) ರಷ್ಯನ್ ಪೋಲೆಂಡಿನ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಿ, ಆ ಪ್ರದೇಶದ ಮಿಲಿಟರಿ ಆಯೋಗದ ಅಧ್ಯಕ್ಷನೆಂದು ಪಿಲ್ಸೂಟ್ಸ್ಕಿಯನ್ನು ಮಾನ್ಯ ಮಾಡಿದವು. ಯುದ್ಧದಲ್ಲಿ ತನ್ನ ಸೇನೆಯನ್ನು ಪಿಲ್ಸೂಟ್ಸ್ಕಿ ನಿರಾಕರಿಸಿದಾಗ ಜರ್ಮನ್ನರು ಇವನನ್ನು ಸೆರೆಯಲ್ಲಿಟ್ಟರು (1917-18). ಕೇಂದ್ರ ಶಕ್ತಿಗಳು ಯುದ್ಧದಲ್ಲಿ ಪರಾಜಯ ಹೊಂದಿದಾಗ ಪಿಲ್ಸೂಟ್ಸ್ಕಿ ಪೋಲೆಂಡಿನ ರಾಜಧಾನಿ ವಾರ್ಸಾಗೆ ಹಿಂದಿರುಗಿದ. ಇವನಿಗೆ ವೀರೋಚಿತ ಸ್ವಾಗತ ದೊರಕಿತು. ಇವನು ಪೋಲೆಂಡಿನ ಅಧ್ಯಕ್ಷನಾಗಿ, ಪೋಲಿಷ್ ಸೇನೆಯ ಮಹಾ ದಂಡನಾಯಕನಾಗಿ ಆಯ್ಕೆ ಹೊಂದಿದ. 1920 ರಲ್ಲಿ ಪೋಲೆಂಡಿನ ಪ್ರಥಮ ಮಾರ್ಷಲ್ ಆದ. 1919-20 ರಲ್ಲಿ ಈತ ಲಿತುವೇನಿಯನ್ನರು, ಊಕ್ರೇನಿಯನರು ಮತ್ತು ಬಾಲ್ಷೇವಿಕರ ವಿರುದ್ಧದ ಯುದ್ಧವನ್ನು ನಿರ್ದೇಶಿಸಿದ. ಪೋಲೆಂಡಿನ ಹೊಸ ಸಂವಿಧಾನದ ರಚನೆಯಾಗಿ ಅದಕ್ಕೆ ಪೋಲಿಷ್ ಸಂಸತ್ತಿನ ಸ್ವೀಕಾರ ಮುದ್ರೆ ಬೀಳುವವರೆಗೆ (1921) ಪಿಲ್ಸೂಟ್ಸ್ಕಿ ಪೋಲೆಂಡಿನ ತಾತ್ಕಾಲಿಕ ಅಧ್ಯಕ್ಷನಾಗಿ ಸರ್ವಾಧಿಕಾರಿಯಾಗಿದ್ದ. 1926 ರಲ್ಲಿ ಈತ ಮತ್ತೆ ಪೋಲೆಂಡಿನ ರಾಜಕೀಯ ವ್ಯವಹಾರಗಳಲ್ಲಿ ಕೈಹಾಕಿದ. ಸೈನ್ಯದ ನೆರವಿನಿಂದ ಪ್ರಧಾನಿ ವಿನ್ಸೆಂಟಿ ವೀಟೋಸನ ಸರ್ಕಾರವನ್ನುರುಳಿಸಿ ಬಾರ್ಟೆಲನ ನೇತೃತ್ವದಲ್ಲಿ ಸಂಪುಟವೊಂದನ್ನು ಅಧಿಕಾರಕ್ಕೆ ತಂದು ಅದರಲ್ಲಿ ಯುದ್ಧ ಮಂತ್ರಿಯಾದ. ಪಿಲ್ಸೂಟ್ಸ್ಕಿ ವಸ್ತುತಃ ಪೋಲೆಂಡಿನ ಸರ್ವಾಧಿಕಾರಿಯಾಗಿ ಮುಂದುವರಿದ. 1926-28 ರಲ್ಲೂ 1930 ರಲ್ಲೂ ಪ್ರಧಾನಿಯಾದರೂ ಯುದ್ಧ ಮಂತ್ರಿಯಾಗಿಯೂ ಸೇನೆಯ ಮಹಾದಂಡನಾಯಕನಾಗಿಯೂ ಇದ್ದು ಪೋಲೆಂಡಿನ ಮೇಲೆ ತನ್ನ ಹಿಡಿತವನ್ನಿಟ್ಟುಕೊಂಡಿದ್ದ. 1935 ರಲ್ಲಿ ಈತ ತೀರಿಕೊಂಡ. 								        (ಆರ್.ಜಿ.ಎಸ್.; ಎಂ.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ